ಕೃಷ್ಣ ಮತ್ತು ಸುಧಾಮರು ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತ, ತಮ್ಮ ಸಹಪಾಠಿಗಳಲ್ಲಿ ಉತ್ತಮ ಗೆಳೆಯರಾಗಿ ಗುರುತಿಸಿಕೊಂಡಿದ್ದರು. ಶಿಕ್ಷಣ ಪೂರ್ಣಗೊಂಡ ನಂತರ, ಕೃಷ್ಣ ಮತ್ತು ಸುಧಾಮರು ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.
ಸುಧಾಮ ಒಬ್ಬ ಬಡ ಬ್ರಾಹ್ಮಣನಾಗಿದ್ದನು, ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದೆ ಕಠಿಣ ದಿನಗಳನ್ನು ಸಾಗಿಸುತ್ತಿದನು. ಕೆಲವೊಮ್ಮೆ, ಒಂದು ಹೊತ್ತಿಗೆ ಹೆಂಡತಿ ಮತ್ತು ಮಕ್ಕಳ ಹೊಟ್ಟೆ ತುಂಬಿಸುವದೂ ಕಷ್ಟವಾಗಿರುತ್ತಿತ್ತು. ಇಷ್ಟಾದರೂ ಅವನು ಬೇರೆಯವರ ಹತ್ತಿರ ಸಹಾಯ ಕೇಳಲು ಹಿಂಜರಿಯುತ್ತಿದ್ದನು. ಕೃಷ್ಣ ದ್ವಾರಕಾ ನಗರದ ರಾಜನಾಗಿ, ಒಳ್ಳೆಯ ರೀತಿಯಲ್ಲಿ ರಾಜ್ಯಭಾರ ಮಾಡುತ್ತ, ತನ್ನ ಹೆಂಡತಿ ರುಕ್ಮಿಣಿ ಜೊತೆ ಸಂತಸದ ಜೀವನ ನಡೆಸುತ್ತಿದ್ದನು.
ಒಂದು ದಿನ, ಸುಧಾಮನ ಹೆಂಡತಿ ಸುಶೀಲ ಸುಧಾಮನಿಗೆ ಹೀಗೆ ಹೇಳುತ್ತಾಳೆ, "ಇಲ್ಲಿಯವರೆಗೆ ದಿನಂಪ್ರತಿ ಕುಟುಂಬದವರೆಲ್ಲರ ಹೊಟ್ಟೆ ತುಂಬಿಸುವದು ಕಷ್ಟವಾಗಿತ್ತು. ಈಗ ಮಕ್ಕಳಿಗೆ ಒಂದು ಹೊತ್ತಿನ ಊಟವೂ ಇಲ್ಲವಾಗಿದೆ. ನೀವು ಯಾರ ಹತ್ತಿರವೂ ಸಹಾಯ ಕೇಳುವುದಿಲ್ಲ. ನೀವು, ನಿಮ್ಮ ಸ್ನೇಹಿತ ಕೃಷ್ಣನ ಬಗ್ಗೆ ಹೇಳುತ್ತೀರಿ; ಯಾಕೆ ನೀವು ಕೃಷ್ಣನ ಹತ್ತಿರ ಹೋಗಿ ಸಹಾಯ ಕೇಳಬಾರದು".
ಸುಧಾಮ
ಮೊದಲು ಈ ಮಾತಿಗೆ ಒಪ್ಪಲಿಲ್ಲ. ಬೇರೆ ದಾರಿ ಕಾಣದೆ, "ಸ್ನೇಹಿತನಲ್ಲಿ ಸಹಾಯ ಕೇಳುವದರಲ್ಲಿ ತಪ್ಪೇನಿಲ್ಲ" ಎಂದ ಹೆಂಡತಿಯ ಮಾತಿಗೆ ಒಪ್ಪಿ, ಕೃಷ್ಣನ ಹತ್ತಿರ ಹೋಗಲು ತೀರ್ಮಾನಿಸಿದನು.
ಮಾರನೆಯ ದಿನ ಬೆಳಿಗ್ಗೆ ಕೃಷ್ಣನಲ್ಲಿಗೆ ಹೋಗಲು ಸಿದ್ಧನಾದನು.
ಕೃಷ್ಣನಲ್ಲಿ ಸಹಾಯ ಕೇಳುವುದು ಬೇಡ, ಅವನ ದರ್ಶನ ಪಡೆದು ಹಿಂದಿರುಗಿ ಬರೋಣವೆಂದು ಮನದಲ್ಲಿ ನಿಶ್ಚಯಿಸಿದ್ದನು. ಹೆಂಡತಿಗೆ ಹೇಳಿ ಮನೆಯಲ್ಲಿ ಇದ್ದ ಕೃಷ್ಣನ ಇಷ್ಟದ ಕುಚಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿಸಿಕೊಂಡನು.
ಸುಧಾಮ ಗುರುಕುಲದ ನೆನಪುಗಳನ್ನು ಮೆಲಕುಹಾಕುತ್ತ, ಕೃಷ್ಣನ ಅರಮನೆಯನ್ನು ಬಂದು ತಲುಪಿದ. ಅರಮನೆ ಕಾವಲುಗಾರರು ಸುಧಾಮನ ವೇಷಭೂಷಣಗಳನ್ನು ನೋಡಿ, ಒಳಗೆ ಹೋಗದಂತೆ ತಡೆಹಿಡಿದರು. ಸುಧಾಮ "ನಾನು ನಿಮ್ಮ ರಾಜ ಶ್ರೀಕೃಷ್ಣನ ಬಾಲ್ಯಸ್ನೇಹಿತ. ಕೃಷ್ಣನಿಗೆ ನಿಮ್ಮ ಬಾಲ್ಯಸ್ನೇಹಿತ ಸುಧಾಮ ಬಂದಿರುವನೆಂದು ತಿಳಿಸಿ" ಎಂದು ಕಾವಲುಗಾರನಿಗೆ ಹೇಳಿದನು.
ಒಬ್ಬ ಕಾವಲುಗಾರ ಅರಮನೆ ಒಳಗೆ ಹೋಗಿ, ಸುಧಾಮ ಬಂದಿರುವ ವಿಷಯವನ್ನು ಕೃಷ್ಣನಿಗೆ ತಿಳಿಸಿದ. ಸುಧಾಮನ ಹೆಸರನ್ನು ಕೇಳಿದ ತಕ್ಷಣ,
ಕೃಷ್ಣ
ತಾನೇ ಖುದ್ಧಾಗಿ ಅರಮನೆ ದ್ವಾರಬಾಗಿಲಿನ ಹತ್ತಿರ ಬಂದು, ಆಪ್ತಸ್ನೇಹಿತ ಸುಧಾಮನನ್ನು ಸ್ವಾಗತಿಸಿದನು. ಕೃಷ್ಣ ತನ್ನ ರಾಣಿ ರುಕ್ಮಿಣಿಗೆ ಸುಧಾಮನನ್ನು ಪರಿಚಯಿಸಿದನು.
ಸ್ನೇಹಿತನ ಸ್ವಾಗತ, ಸತ್ಕಾರಗಳಿಂದ ಸುಧಾಮನ ಮನ ತುಂಬಿಹೋಗಿತ್ತು. ಸುಧಾಮ ಕುಚಲಕ್ಕಿಯನ್ನು ಕೃಷ್ಣನಿಗೆ ಕೊಡಲು ಸಂಕೋಚ ಪಡುತ್ತಿದ್ದನು; ಇದನ್ನರಿತ ಕೃಷ್ಣ ಗೆಳೆಯನ ಬಟ್ಟೆಯ ಗಂಟನ್ನು ತೆರೆದು ನೋಡಿ "ನನ್ನಿಷ್ಟದ ಕುಚಲಕ್ಕಿ ತಂದು, ನನಗೆ ಕೊಡದೆ ಹಾಗೆ ಇಟ್ಟುಕೊಂಡಿರುವೆಯಾ" ಎಂದು, ತಾನೂ ತಿಂದು ರುಕ್ಮಿಣಿಗೂ ತಿನ್ನಲು ಕೊಟ್ಟನು. ಕುಚಲಕ್ಕಿಯ ಪ್ರತಿ ತುತ್ತನ್ನು ಕೃಷ್ಣ ಆಶ್ವಾದಿಸುವ ಪರಿಯನ್ನು ನೋಡಿ, ಸುಧಾಮನಿಗೆ ತನ್ನೆಲ್ಲ ಕಷ್ಟಗಳು ಒಂದೊಂದಾಗಿ ಪರಿಹಾರವಾದ ಅನುಭೂತಿಯಾಯಿತು. ಸುಧಾಮ, ಗೆಳೆಯನ ಜೊತೆ ಅರಮನೆಯ ಮೃಷ್ಟಾನ್ನ ಭೋಜನವನ್ನು ಸವಿದನು; ಒಳಗೊಳಗೇ ಹೆಂಡತಿ-ಮಕ್ಕಳನ್ನು ನೆನೆದು ಮನ ಕೊರಗುತ್ತಿತ್ತು. ಊಟದ ನಂತರ, ಕೃಷ್ಣ-ಸುಧಾಮರು ತಮ್ಮ ಬಾಲ್ಯದ ಸ್ನೇಹಿತರು, ಗುರುಕುಲದ ಶಿಕ್ಷಣದ ಬಗ್ಗೆ ಮಾತನಾಡುತ್ತ ಕಾಲಕಳೆದರು.
ಎರಡು ದಿನಗಳು ಕಳೆಯುವದರಲ್ಲಿ, ಸುಧಾಮ ಕೃಷ್ಣನ ಪ್ರೀತಿಯ ಸಾಗರದಲ್ಲಿ ಖುಷಿಯಿಂದ ತೇಲಿಹೋಗಿದ್ದ, ಆದರೆ ಒಮ್ಮೆಯೂ ಕೃಷ್ಣನ ಬಳಿ ತನ್ನ ಪರಿಸ್ಥಿತಿ ತಿಳಿಸಿ, ಸಹಾಯ ಕೇಳಿರಲಿಲ್ಲ. ತನ್ನ ಹಳೆಯ ವಸ್ತ್ರಗಳನ್ನು ಧರಿಸಿ, ಶ್ರೀಕೃಷ್ಣನಿಂದ ಅನುಮತಿ ಪಡೆದು, ಅರಮನೆಯಿಂದ ಹೊರಟನು. ಭಾರವಾದ ಮನದಿಂದಲೇ ತನ್ನ ಊರಿನ ದಾರಿಹಿಡಿದನು.
ಊರು ತಲುಪಿ, ತನ್ನ ಮನೆ ಇರುವ ಜಾಗದಲ್ಲಿ ಒಂದು ಭವ್ಯವಾದ ಅರಮನೆ ಇರುವದನ್ನು ನೋಡಿ ಆಶ್ಚರ್ಯ ಚಕಿತನಾದನು. ಅರಮನೆ ದ್ವಾರಬಾಗಿಲಲ್ಲೇ ವಿಚಾರಮಾಡುತ್ತ ನಿಂತನು. ಅರಮನೆ ಒಳಗಿಂದ ಸುಧಾಮನ ಹೆಂಡತಿ ಸುಶೀಲ ಮತ್ತು ಮಕ್ಕಳು ಸುಧಾಮನ ಬಳಿಬಂದರು. ಅವರೆಲ್ಲರೂ ಒಳ್ಳೆಯ ವಸ್ತ್ರಗಳು, ಒಡವೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದರು. ಶ್ರೀಕೃಷ್ಣನ ಅನುಗ್ರಹದಿಂದ ತಮ್ಮೆಲ್ಲ ಕಷ್ಟಗಳು ದೂರವಾದ ವಿಷಯವನ್ನು ವಿವರಿಸಿದರು, ಕೃಷ್ಣನನ್ನು ನೆನದು, ನಮಿಸಿದರು. ತಾನೇನೂ ಕೇಳದೆ, ತನ್ನೆಲ್ಲ ಕಷ್ಟಗಳನ್ನು ಅರಿತು ಸಹಾಯ ಮಾಡಿದ ಸ್ನೇಹಿತನಿಗೆ ಸುಧಾಮ ಮನದಲ್ಲಿ ನಮಿಸಿದನು.
ಕೃಷ್ಣ - ಸುಧಾಮರ ಕಥೆ ನಮಗೆ "ಆಪತ್ತಿಗಾದವನೇ ನಿಜವಾದ ಗೆಳೆಯ" ಎಂಬ ಸಾರಾಂಶವನ್ನು ತಿಳಿಸುತ್ತದೆ.
ಕೃಷ್ಣ - ಸುಧಾಮರ ಕಥೆ ನಮಗೆ "ಆಪತ್ತಿಗಾದವನೇ ನಿಜವಾದ ಗೆಳೆಯ" ಎಂಬ ಸಾರಾಂಶವನ್ನು ತಿಳಿಸುತ್ತದೆ.